Wednesday, January 20, 2010

ಒಲವು

ಕರಿಮುಗಿಲಿನ ಸೆರಗಂಚಲಿ ಬಿಳಿಚುಕ್ಕಿಯ ಕಿರಣ
ಮೂಡಲು ಮನ ಕರಗುತ್ತಿರೆ ಹನಿ ಹನಿಗಳ ಮಿಲನ.
ಹೊಸ ರಾಗದ ಹೊಸ ಭಾವದ ಹೊಸ ಬದುಕಿನ ಕವನ ,
ಪಲ್ಲವಿಯಲಿ ಅವಳಿರುತಿರೆ ಆನಂದವೇ ಚರಣ .

ಕಾರಿರುಳಲಿ ಕವಿದಿರಲು ಕಹಿನೆನಪಿನ ಶೂನ್ಯ,
ಆ ಕಂಗಳ ಶಶಿಕಾಂತಿಯೇ ಜೀವಕೆ ಚೈತನ್ಯ.
ತಂಗಾಳಿಯು ಹರಿಸುತ್ತಿರೆ ಬಿಸಿಯುಸಿರಿನ ಧಾರೆ,
ಆ ಸ್ಪರ್ಶದ ಉತ್ಕರ್ಷವೆ ಆತ್ಮತಮೋಹಾರಿ.

ಕನ್ನಡಿಯಲಿ ಕೈತಾಕಿದ ಸವಿಗನಸಿನ ಪ್ರೀತಿ,
ಎಂದಾದರೂ ದೊರಕುವುದೇ ? ನನಗೆಲ್ಲೋ ಭ್ರಾಂತಿ.
ಎದೆಗಪ್ಪಿದ ಒಲವಿಂದು ನಿಲುಕದ ನಕ್ಷತ್ರ,
ನೆನಪೊಂದೇ ಶಾಶ್ವತವು ಉಸಿರಿದು ನೆಪಮಾತ್ರ......

ಹೂವ ಹನಿ ....


ನಡೆದ ದಾರಿ ಮತ್ತೆ ಕರೆಯಲು
ಮೂಕ ಮನಸಿನ ನರ್ತನ .
ಮರೆತ ಹಾಡು ನೋವ ಬರೆಯಲು
ಕಣ್ಣ ತುದಿಯಲ್ಲಿ ಕಂಪನ .

ಸೇರಿ ಕಟ್ಟಿದ ಕನಸಿನಲ್ಲಿ
ಮೂಡಿ ಚಿಕ್ಕ ಬಿರುಕು .
ಹೃದಯವೆಂಬ ಗೋರಿಯಲ್ಲಿ
ಮುಚ್ಚಿ ಹೋಯಿತು ಬದುಕು .

ಹೂವ ಅಡಿಯಲಿ ಮುಳ್ಳು ಸಿಗುವುದು
ಕೊಡುವೆಯೇನು ಕಾರಣ
ಒಳಗೆ ಅಳುತಲಿ ಮೇಲೆ ನಗುವುದು
ಇದುವೆ ಅಲ್ಲವೆ ಜೀವನ ...?

Tuesday, January 19, 2010

ಮೌನ ಕ್ರಿಯೆ ....


ಒಂದು ವಸ್ತುವಿನೊಡನೆ ಆಟವಾಡುತ್ತಿರುವ ಚಿಕ್ಕ ಮಗುವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ತನ್ನ ಕೆಲಸದಲ್ಲಿ ಅದು ಎಷ್ಟು ತಲ್ಲೀನವಾಗಿರುತ್ತದೆ ಎಂದರೆ , ನಮ್ಮ ಕರೆಗೆ ಒಂದೆರಡು ಸಲ ಅದು ಒಗೊಡುವುದಿಲ್ಲ. ಈ ತನ್ಮಯತೆ , ಈ ಕುತೂಹಲ ನಮ್ಮ ವಯಸ್ಸಿನ ಬೆಳವಣಿಗೆಯ ಜೊತೆಗೆ ಕರಗಿಹೋಗುತ್ತದೆ. ಆದರೆ ಕೆಲವರನ್ನು ನೋಡಿದರೆ ಆ ಮಗ್ನತೆಯನ್ನು ಇನ್ನೂ ಉಳಿಸಿಕೊಂಡಿರುತ್ತಾರೆ. ಇದು ಒಂದೇ ಸಲಕ್ಕೆ ಒಲಿಯುವ ವರವಲ್ಲ. ನಿಧಾನವಾಗಿ ನಮ್ಮ ಪರಿಶ್ರಮದ ಮೂಲಕ ನಾವು ಕೂಡ ಇದನ್ನು ನಮ್ಮಲ್ಲಿ ಬೆಳೆಸಿಕೊಳ್ಳಬಹುದು. ಸಾಮಾನ್ಯವಾಗಿ ಈ ರೀತಿಯವರು ನಮಗೆ ಕಲಾಪ್ರಪಂಚದಲ್ಲಿ ಕಾಣಸಿಗುತ್ತಾರೆ. ಬಹುಷಃ ಕಲಾದೇವಿ ಈ ಮುಗ್ಧತೆಯನ್ನೇ ಬಯಸುತ್ತಾಳೇನೋ. ಸಾಹಿತಿಗಳು, ನಾಟಕಕಾರರು ,ಅಷ್ಟೇ ಏಕೆ ಕುಸುರಿ ಕೆಲಸದ ಪರಿಣತರು ಈ ರೀತಿಯ ಮೌನ ಕ್ರಿಯೆಯಲ್ಲಿ ಹೆಚ್ಚು ತೊಡಗಿರುತ್ತಾರೆ . ಅವರನ್ನು ನೋಡುವುದು, ಅವರ ಜೊತೆಗೆ ಸಮಯ ಕಳೆಯುವುದು ನಿಜಕ್ಕೂ ಆನಂದವನ್ನುಂಟು ಮಾಡುತ್ತದೆ . ಜಂಜಡಗಳ ನಡುವೆ ಜೀವನ ಪ್ರೀತಿಯನ್ನು ಬೆಳೆಸಿಕೊಳ್ಳಲು ಈ ಶ್ರದ್ಧೆ , ನಮ್ಮನ್ನು ನಾವು ಕಳೆದುಕೊಂಡು ಸಂತೋಷವನ್ನು ಪಡೆಯುವುದಕ್ಕೆ ಈ ಮೌನದ ಗೆಳೆತನ ನಮ್ಮೆಲ್ಲರ ಬದುಕಿಗೆ ಬೇಕು ..........

Sunday, January 17, 2010

ಪಯಣ .......


ಬಹಳಷ್ಟು ಜನರಿಗೆ ಬಸ್ಸಿನಲ್ಲಿ ಪ್ರಯಾಣಿಸುವುದು ಎಂದರೆ ತುಂಬ ತ್ರಾಸು . ಅದರಲ್ಲೂ ಕೂರಲು ಜಾಗ ಸಿಗದೇ ಬಸ್ಸೆಲ್ಲಾ ಜನರಿಂದ ತುಂಬಿ ಹೋಗಿದ್ದರಂತೂ ಮುಗಿದೇ ಹೋಯಿತು. ಎಲ್ಲಾ ಅಸಹನೆಯನ್ನು ಅಕ್ಕ ಪಕ್ಕದವರ ಮೇಲೆ ತೋರಿಸಲು ಶುರು ಮಾಡುತ್ತಾರೆ . ಆದರೆ ಒಂದು ತಂಪು ಸಂಜೆಯಲ್ಲಿ , ಸುಂದರವಾದ ದಾರಿಯಲ್ಲಿ ಕಿಟಕಿಯಾಚೆಗೆ ಕಣ್ಣು ಹಾಯಿಸುತ್ತಾ , ನೆನಪುಗಳನ್ನು ಮೆಲುಕು ಹಾಕುತ್ತಾ ಹಾದಿಗುಂಟ ಕ್ರಮಿಸುವುದು ಮನಸ್ಸಿಗೆ ಹಿತವನ್ನೀಯುತ್ತದೆ . ಅದು ನಗರ ಪ್ರಯಾಣವಾದರೂ ಸರಿಯೇ . ಕಾಣುವ ಜನರು, ಅವರ ಹಾವ ಭಾವ ಇವುಗಳು ಕುತೂಹಲಕರವಾಗಿರುತ್ತದೆ . ಆದರೆ ಪಕ್ಕದಲ್ಲಿ ಯಾರಾದರೂ "ಕೊರಿ"ಯರ್ ಪಾರ್ಟಿ ಕುಳಿತುಬಿಟ್ಟರೆ ಇಡೀ ದಾರಿಯನ್ನು ಮೈಲುಗಟ್ಟಲೆ ಹೆಚ್ಚಿಸಿಬಿಡುತ್ತಾರೆ. ಹಳ್ಳಿ ಕಡೆ ಅದರಲ್ಲೂ ಮಲೆನಾಡಿನ ಕಡೆ ಬಸ್ಸು ಪ್ರಯಾಣ ಒಂದು ನೆನಪಿನ ಬುತ್ತಿಯೇ ಸರಿ . ಹಾವಿನ ರಸ್ತೆಗಳಲ್ಲಿ ಡ್ರೈವರನ ಪ್ರಾವೀಣ್ಯವನ್ನು ಬಾಯಿ ಬಿಟ್ಟು ನೋಡುತ್ತಾ ಗೇರ್ ಬಾಕ್ಸಿನ ಮೇಲೆ ಕಾಲು ಇಟ್ಟು ,ನಾವು ಕೂಡ ಜೀವನದಲ್ಲಿ ಮುಂದೆ ಡ್ರೈವರ್ ಆಗಬೇಕೆಂಬ ಮಹದೋದ್ದೇಶ (?) ನಮ್ಮ ಚಿಕ್ಕಂದಿನಲ್ಲಿ ಬಂದಿದ್ದು ಸುಳ್ಳಲ್ಲ ...... ನೆನೆಸಿಕೊಂಡರೆ ಮನಸ್ಸಿನಲ್ಲಿ ಈಗಲೂ ಸಹ ಗೇರ್ ಬಾಕ್ಸ್ ನ ಬಿಸುಪು !!! ಮನಸ್ಸಿನ ತುಮುಲಗಳನ್ನು ಕಳೆದುಕೊಳ್ಳಲು ಪ್ರಕೃತಿಗಿಂತಾ ಉತ್ತಮ ಗೆಳೆತಿ ಬೇಕೇ .......???