Sunday, December 23, 2012

ಯೆಳಗಿರಿಯ ಸೊಬಗು

ಬಹಳ ದಿನಗಳ ನಂತರ ಪ್ರಕೃತಿಯ ಮಡಿಲಲ್ಲಿ ಸವಿ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶ ಒದಗಿತು. ಇದ್ದಕ್ಕಿದ್ದ ಹಾಗೆ ಮನಸ್ಸಿಗೆ ಬಂದ ಯೋಚನೆ. ಈ ವಾರ ನಮ್ಮನ್ನು ಈ ಗಿರಿ ಶಿಖರದತ್ತ ಕರೆದೊಯ್ಯಿತು. ಸರಿ, ಹೇಗಿದ್ದರೂ ನಾವು ಮನಸ್ಸಿನ ಮಾತು ಕೇಳುವವರು ತಾನೇ ........ ಬಂಡಿ ಹೊರಟೇಬಿಟ್ಟಿತು !!!!!!!!!!!

ಶನಿವಾರದ ಮುಂಜಾನೆ ಮನೆಯಲ್ಲಿ ತಿಂಡಿ ಮುಗಿಸಿ ಹೊರಟ ನಾವು ಬೆಂಗಳೂರು ಬಿಡುವಷ್ಟರಲ್ಲಿ 2 ತಾಸು ಕಳೆದಿತ್ತು. ನಮ್ಮ ಈ ನಗರದ ಟ್ರಾಫಿಕ್ ದುಸ್ತಿತಿಯನ್ನು  ಬೈದುಕೊಳ್ಳುತ್ತಾ ಚೆನ್ನೈ ಹೆದ್ದಾರಿಯನ್ನು ಮುಟ್ಟಿದೆವು. ಅಲ್ಲಿಂದ ಪ್ರಯಾಣ ಸುಗಮವಾಗಿತ್ತು. ಅಂತು ಇಂತೂ ಯೆಳಗಿರಿಯ ಬುಡವನ್ನು  ಮುಟ್ಟುವಷ್ಟರಲ್ಲಿ ಸೂರ್ಯ ನೆತ್ತಿ ಮೇಲೇರುತ್ತಿದ್ದ.  












ಯೆಳಗಿರಿ ತಮಿಳುನಾಡಿನ ವೆಲ್ಲೋರ್ ಜಿಲ್ಲೆಯಲ್ಲಿರುವ ಒಂದು ಗಿರಿಧಾಮ. ಸಮುದ್ರಮಟ್ಟದಿಂದ ಸುಮಾರು 1410 ಮೀಟರ್ ಎತ್ತರದಲ್ಲಿದೆ. ಬೆಟ್ಟವನ್ನೇರಲು 14 ಕಡಿದಾದ ತಿರುವುಗಳ ಮೂಲಕ ಸಾಗಬೇಕು. ಒಂದೊಂದು ಹಂತ ದಾಟಿದಾಗಲೂ ಅಲ್ಲಿಂದ ಕಾಣುವ ದೃಶ್ಯ ಅಪೂರ್ವ. ಬೆಟ್ಟದ ಮೇಲೆ ತಲುಪಿ ನಾವು ಉಳಿಯಲು ವ್ಯವಸ್ಥೆ ಮಾಡಿಕೊಂಡಿದ್ದ ಸ್ಥಳಕ್ಕೆ ತಲುಪುವುದರಲ್ಲಿ ಹೊಟ್ಟೆ ತಾಳ ಹಾಕುತಿತ್ತು. ಊಟದ ಶಾಸ್ತ್ರ ಮುಗಿಸಿ, ತುಸು ದಣಿವು ನಿವಾರಿಸಿ, ಯೆಳಗಿರಿಯ ಪ್ರಮುಖ ಆಕರ್ಷಣೆ - ಪುಂಗನೂರು ಕೆರೆ  - "ಬೋಟ್ ಹೌಸ್" ಗೆ ಹೊರಟೆವು. ಹೆಸರು ಕೇಳಿ, ಕೇರಳ ಮಾದರಿಯ ತೇಲುವ ಮನೆಯನ್ನು ಊಹಿಸಿಕೊಂಡು ಹೋದೆವು. ಆ ರೀತಿಯದ್ದೇನೂ ಇರಲಿಲ್ಲ ಎಂದು ನಿರಾಶೆಯಾದರೂ, ಅಲ್ಲಿನ ಮೋಹಕ ನೋಟಕ್ಕೆ ಮನಸೋತೆವು. ಮಾನವ ನಿರ್ಮಿತ ಕೆರೆಯಾದರೂ ಸುತ್ತಮುತ್ತಲ ಗುಡ್ಡಗಳಿಂದಾಗಿ ಇದರ ಸೌಂದರ್ಯ ಇಮ್ಮಡಿಸಿದೆ. ಅಲ್ಲಿನ ತಂಪು ಗಾಳಿ ನಮಗೆ ಚೇತನ ನೀಡುತ್ತದೆ.

ಗಿರಿಧಾಮವಾದರೂ, ಕಡಿಮೆ ಮಳೆ ಬೀಳುವ ಪ್ರದೇಶವಾದ ಕಾರಣ ಯೆಳಗಿರಿಯಲ್ಲಿ ಅಂಥಾ ಕೊರೆಯುವ ಚಳಿ ಇರುವುದಿಲ್ಲ. ಆದರೂ ನಗರದ ಹೊಗೆಯ ಚಳಿಗಿಂತ ನಿಸರ್ಗದ ಶುದ್ಧ ತಂಪು ಹಾಯೆನಿಸುತ್ತದೆ. ಅಲ್ಲಿನ ಮತ್ತೊಂದು ನೋಡುವಂಥ ಜಾಗವೆಂದರೆ "ನಿಸರ್ಗ ಧಾಮ" (Nature Park). ಉತ್ತಮ ನಿರ್ವಹಣೆಯಿಂದ ಪ್ರವಾಸಿಗರಿಗೆ ಅಲ್ಲಿ ಖುಷಿಯ ಅನುಭವವಾಗುತ್ತದೆ.

ಅಲ್ಲಿನ ಸಂಜೆ  - ಏಕಾಂತವಾಗಿ ದಿನ ನಿತ್ಯದ ಜಂಜಡವನ್ನು ಮರೆತು ಹಾಯಾಗಿ ಕಳೆಯುವುದರಲ್ಲಿ ಸಮಯ ಹೋಗಿದ್ದೆ ಗೊತ್ತಾಗುವುದಿಲ್ಲ. ಚುಮು ಚುಮು ಚಳಿಯಲ್ಲಿ ಕೈಯಲ್ಲಿ ಕಾಫಿ ಹಿಡಿದು ಅಲ್ಲಿ ಕೂತರೆ ಜೀವನ ಹೀಗೆ ಇದ್ದುಬಿಡಬಾರದೆ  ಎನಿಸುವುದು ಸುಳ್ಳಲ್ಲ !!!

ಒಂದು ದಿವ್ಯ ಸಂಜೆ, ಏಕಾಂತದ ರಾತ್ರಿ ಹಾಗು ತಂಪು ಮುಂಜಾನೆಯ ಸವಿ ಉಂಡು ಮರುದಿನ ನಮ್ಮ ಎಂದಿನ "ಲೈಫು ಇಷ್ಟೇನೆ" ಭಾವನೆಯೊಂದಿಗೆ ಮನೆಗೆ ತೆರಳಿದೆವು..

ಯೆಳಗಿರಿಯ ನೆನಪು..... ಪುನಃ ಮರಳುವೆವೆಂಬ ವಿಶ್ವಾಸದೊಂದಿಗೆ .......

Tuesday, November 13, 2012

ಬೆಳಕು



ದಿನ ನಡೆವ ಹಾದಿಯಲಿ ನಸುಗೆಂಪು ಮೂಡಿರಲು,
ಇಳಿಸಂಜೆ ಜಾರಿತು ಹೊಂಗಡಲಲಿ,
ನಿಶೆ ತಬ್ಬಿದಾ ನಭದಿ ಶಶಿ ಚುಕ್ಕಿ  ಇಣುಕಿರಲು,
ಇಳೆ  ನಾಚಿ ಮುದುಡಿತು ವನದೊಡಲಲಿ. 

ಗರಿ ಬಿಚ್ಚಿ ಹಗಲೆಲ್ಲ ಹುಡುಕಾಟದಿ ದಣಿದು,
ಸಿಕ್ಕ ಪ್ರತಿ  ತುತ್ತಿಗೆ ನೆನೆನೆನೆದು ದೈವ,
ತನ್ನ ಜೀವದ ಕುಡಿಯ ಚಿಲಿಪಿಲಿಯ ನಾದದೊಳು,
ನಿದಿರೆ ತಾ ಬಂದಿರಲು ಸಂತೃಪ್ತ ಭಾವ. 

ಮಹಾಕಾರ ಮರಗಳಿಂ ಆವೃತ್ತ ಭಯಕೂಪ,
ಕರುಳ ಬಳ್ಳಿಯ ಚಿವುಟಿ ಹೊರಟೀತೆ ಮುಂದೆ ??
ಎದೆ ನಡುಗಿ ಕೊರಳುಬ್ಬಿ ಕೂಗೊಂದು ಹೊರಬರಲು,
ಕನಸು ಎಂದರಿಯಿತು ಅ ಪುಟ್ಟ ಜೀವ.


ತಮದ ತೆರೆಯನು ಸರಿಸಿ ಉಷೆಯು ತಾ ಬಂದಿರಲು, 
ಜಗದಾತ್ಮ ಸ್ಫುರಿಸಿತು ಚೈತನ್ಯ ಧಾರೆ, 
ಕಳೆದ ನೋವನು ಮರೆತು ಬರುವ ನಾಳೆಯ ನೆನೆದು, 
ಹಾರಿತ್ತು ಗೂಡಿಂದ ಬಾನನ್ನು ಮೀರಿ...... 

Friday, October 26, 2012

I am back .............

ಸುಮಾರು ಎರಡೂವರೆ ವರ್ಷ .................

ಬರೆಯಲು ಸಮಯವಿತ್ತು ಆದರೆ ಬರೆಯಬೇಕೆಂಬ ಆ ತುಡಿತವಿರಲಿಲ್ಲ..........

ಕಾರಣಗಳು ಈಗ ಬೇಕಿಲ್ಲ ..... ಅವುಗಳಿಂದ ಉಪಯೋಗವಿಲ್ಲ .....

ಇನ್ನು ಮುಂದಾದರೂ ಬರೆಯುತ್ತೆನೆಂಬ ವಿಶ್ವಾಸದೊಂದಿಗೆ ಮರಳುತ್ತಿದ್ದೇನೆ ..........


ಇಂತಿ ನಿಮ್ಮವ