Tuesday, November 13, 2012

ಬೆಳಕು



ದಿನ ನಡೆವ ಹಾದಿಯಲಿ ನಸುಗೆಂಪು ಮೂಡಿರಲು,
ಇಳಿಸಂಜೆ ಜಾರಿತು ಹೊಂಗಡಲಲಿ,
ನಿಶೆ ತಬ್ಬಿದಾ ನಭದಿ ಶಶಿ ಚುಕ್ಕಿ  ಇಣುಕಿರಲು,
ಇಳೆ  ನಾಚಿ ಮುದುಡಿತು ವನದೊಡಲಲಿ. 

ಗರಿ ಬಿಚ್ಚಿ ಹಗಲೆಲ್ಲ ಹುಡುಕಾಟದಿ ದಣಿದು,
ಸಿಕ್ಕ ಪ್ರತಿ  ತುತ್ತಿಗೆ ನೆನೆನೆನೆದು ದೈವ,
ತನ್ನ ಜೀವದ ಕುಡಿಯ ಚಿಲಿಪಿಲಿಯ ನಾದದೊಳು,
ನಿದಿರೆ ತಾ ಬಂದಿರಲು ಸಂತೃಪ್ತ ಭಾವ. 

ಮಹಾಕಾರ ಮರಗಳಿಂ ಆವೃತ್ತ ಭಯಕೂಪ,
ಕರುಳ ಬಳ್ಳಿಯ ಚಿವುಟಿ ಹೊರಟೀತೆ ಮುಂದೆ ??
ಎದೆ ನಡುಗಿ ಕೊರಳುಬ್ಬಿ ಕೂಗೊಂದು ಹೊರಬರಲು,
ಕನಸು ಎಂದರಿಯಿತು ಅ ಪುಟ್ಟ ಜೀವ.


ತಮದ ತೆರೆಯನು ಸರಿಸಿ ಉಷೆಯು ತಾ ಬಂದಿರಲು, 
ಜಗದಾತ್ಮ ಸ್ಫುರಿಸಿತು ಚೈತನ್ಯ ಧಾರೆ, 
ಕಳೆದ ನೋವನು ಮರೆತು ಬರುವ ನಾಳೆಯ ನೆನೆದು, 
ಹಾರಿತ್ತು ಗೂಡಿಂದ ಬಾನನ್ನು ಮೀರಿ...... 

No comments:

Post a Comment