Thursday, December 31, 2009

ಹೊಸ ಕನಸು ....


Happy New Year 2010........

ಕಳೆದು ಹೋದ ವರ್ಷದ ನೆನಪಿನ ಇಬ್ಬನಿಯ ಮೇಲೆ , ಹೊಸ ಸೂರ್ಯನ ಹೊನ್ನ ಕಿರಣಗಳು ನಾಳೆಯ ಕನಸುಗಳ ಚಿತ್ತಾರವನ್ನು ಬಿಡಿಸಲು ಸಜ್ಜಾಗುತ್ತಿದೆ....ಆಡಿದ ಮಾತುಗಳು , ಮಾಡಿದ ಕಾರ್ಯಗಳು , ಎಲ್ಲೋ ಸಿಕ್ಕಿದ ಹೊಸ ಸಂಬಂಧಗಳು ಜೀವನದ ದಾರಿಯನ್ನು ಕ್ರಮಿಸಲು ಒಂದು ಮುಗುಳ್ನಗೆಯ ಜೊತೆಯನ್ನು ನೀಡುತ್ತವೆ. ಬರುವ ವರುಷದ ಕ್ಷಣಗಳು ಕೂಡ ಸಂತೋಷದ ಬೆಳ್ಳಿ ಚುಕ್ಕಿಯನ್ನು ಎಲ್ಲರ ಮನೆ ಮನಗಳಲ್ಲಿ ಮೂಡಿಸಲಿ ಎಂದು ಹಾರೈಸುತ್ತಾ ........ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ...............

Tuesday, December 29, 2009

ಎರಡು ಯುಗಾಂತ್ಯ.....

2009 ಹೋಗುತ್ತಾ ಹೋಗುತ್ತಾ , ಸಂಗೀತ ಹಾಗು ಚಿತ್ರ ಪ್ರೇಮಿಗಳಲ್ಲಿ ಒಂದು ಕಣ್ಣೀರ ಬಿಂದುವನ್ನುಳಿಸಿ ಹೋಗುತ್ತಿದೆ. ಇಹದ ನಾಟಕಕ್ಕೆ ತೆರೆ ಎಳೆದು, ಇಬ್ಬರು ಅದ್ಭುತ ಕಲಾವಿದರನ್ನು ವಿಧಿ ತನ್ನೆಡೆಗೆ ಸೆಳೆದೊಯ್ಯಿತು. ಸಿ. ಅಶ್ವಥ್ ಹಾಗು ವಿಷ್ಣುವರ್ಧನ್ ಕನ್ನಡದ ಹೃದಯಗಳಲ್ಲಿ ಮೂಡಿಸಿದ ಛಾಪು ಅಜರಾಮರ. ತಾರಕ ಗಾಯನದ ಗಾರುಡಿಗ ಮತ್ತು ಅಪೂರ್ವ ಸಂಯೋಜಕ ಅಶ್ವಥ್ ಅವರ ಮಾಯೆಗೆ ಎಂಥವರನ್ನಾದರೂ ಕರಗಿಸುವ ತಾಕತಿತ್ತು . ಭಾವಗೀತೆ ಮತ್ತು ಸುಗಮ ಸಂಗೀತದ ಬೆಳವಣಿಗೆಯಲ್ಲಿ ಅವರ ಪಾಲೇ ಹೆಚ್ಚು ಅಂದರೆ ಸುಳ್ಳಲ್ಲ . ಭಾವುಕ ಮನಸ್ಸುಗಳು ಅಶ್ವಥ್ ಕಂಠವನ್ನು miss ಮಾಡಿಕೊಳ್ಳುವುದಂತೂ ನಿಶ್ಚಿತ . ಇನ್ನು ಕನ್ನಡದ "ಸಿಂಹ" , ಡಾ. ವಿಷ್ಣುವರ್ಧನ್ ಇಷ್ಟು ಬೇಗ ಯಾತ್ರೆ ಮುಗಿಸುತ್ತಾರೆಂದು ಯಾರೂ ಎಣಿಸಿರಲಿಕ್ಕಿಲ್ಲ . ಪುಟ್ಟಣ್ಣನವರ ಶೋಧದ ಈ ಪ್ರತಿಭೆ ,ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬೆಳಗಿದ ರೀತಿ ಅದ್ಭುತ . ಇನ್ನು ಮುಂದೆ ಅವರ ನೂರೊಂದು ನೆನಪುಗಳು ಮಾತ್ರ ಎಲ್ಲರ ಎದೆಯಾಳದಲ್ಲಿ ಚಿರಸ್ಥಾಯಿ .......

Sunday, December 27, 2009

ಹಕ್ಕಿ ಗೂಡು ....


ಒಂದು ಪುಟ್ಟ ಸಂಸಾರ - ಚಿಕ್ಕದೊಂದು ಕೆಲಸದಲ್ಲಿರುವ ಗಂಡ, ಮನೆ ನಿಭಾಯಿಸುವ ಹೆಂಡತಿ, ಈಗಿನ್ನೂ ಶಾಲೆಯ ಮೆಟ್ಟಿಲು ಹತ್ತುತ್ತಿರುವ ಕಂದಮ್ಮ . ಇವರ ದಿನಚರಿ, ಇವರ ಅಗತ್ಯಗಳು, ದುಡ್ಡಿನ ಅಡಚಣೆ ನಡುವೆ ಜೀವನ ನಡೆಸುವ ಅನಿವಾರ್ಯತೆ ಇವೆಲ್ಲ ಸಾಧಾರಣ ಅನಿಸಬಹುದು. ಆದರೆ ಅವರ ನಾಳೆಯ ಕನಸುಗಳು ಇರುತ್ತವಲ್ಲ , ಅವು ಅದ್ಭುತ ಜೀವನ ಪ್ರೀತಿಯ ಪ್ರತೀಕ. ಅವರ ಕನಸುಗಳಾದರೂ ಏನು - ಒಂದು ಚಿಕ್ಕ ಸ್ವಂತ ಮನೆ , ಮಗ/ಮಗಳ ಉತ್ತಮ ವಿದ್ಯಾಭ್ಯಾಸ , ಒಂದು ಒಳ್ಳೆ ನೌಕರಿ, ತಕ್ಕಂತೆ ಮದುವೆ , ಮೊಮ್ಮಕ್ಕಳು , ಇಳಿ ವಯಸ್ಸಿನಲ್ಲಿ ಸ್ವಾವಲಂಬನೆ .......ಇದು ಈಗ್ಗೆ ಒಂದೆರಡು ದಶಕದ ಹಿಂದೆ ಹೇಗಿತ್ತೋ , ಈಗಲೂ ಸಹ ಹಾಗೆಯೇ ಇದೆ. ಅದರ ಚಿತ್ರಣ ಬೇರೆ ಇರಬಹುದೇ ವಿನಃ ಅದರ ಮೂಲ ಕೃತಿ , ಆ ಕನಸು ಈಗಲೂ ಸಹ ಅದೇ ಸವಿಯನ್ನು ಉಳಿಸಿಕೊಂಡಿವೆ. ಬಹುಷಃ ಈ ರೀತಿಯ ಹಿನ್ನೆಲೆಯಿಂದ ಬಂದವರು ಜೀವನವನ್ನು ನೋಡುವ ಬಗೆಯೇ ಭಿನ್ನವಾಗಿರುತ್ತದೆ. ಹಕ್ಕಿ ಗೂಡು ಎಲ್ಲಿದ್ದರೂ, ಹೇಗಿದ್ದರೂ,ಅದರಲ್ಲಿ ಬೆಳೆಯುವ ಮರಿಗಳನ್ನು ಆಕಾಶಕ್ಕೆ ಚಿಮ್ಮಿಸುವುದು ರೆಕ್ಕೆಗಳಲ್ಲ .........ಒಂದು ಗುಟುಕು ಪ್ರೀತಿ.......

Thursday, December 3, 2009

ಚುಮು ಚುಮು...!!!!


ಜಿ.ಪಿ.ರಾಜರತ್ನಂರವರ ಸಾಲಿನಂತೆ ಮಂಜು ಈಗ ಮಡಿಕೇರಿ ಮಾತ್ರವಲ್ಲದೆ ಎಲ್ಲೆಡೆ ಹಬ್ಬತೊಡಗಿದೆ . ಬೆಳಗಿನ ಸೂರ್ಯನ ಕಣ್ಣುಮುಚ್ಚಾಲೆ, ಮುಂಜಾವದ ಸಿಹಿ ನಿದ್ರೆ, ಹೊಂಬಣ್ಣದ ಬಿಸಿಲು ಕೋಲುಗಳು, ಎಲೆತುದಿಯ ಮುತ್ತಿನ ಹನಿ.......ಆಹಾ !!!! ...ವರ್ಣಿಸಿದಷ್ಟೂ ವರ್ಣನಾಮಯ. ಮಲೆನಾಡಿನವರಿಗಂತೂ ಮಾಗಿ ಚಳಿ, ಕೊನೆ ಕೊಯ್ಲಿನ ಸಂಭ್ರಮ.....ತುಂಬಿ ಹರಿಯುವ ಶರಾವತಿ, ವರದೆಯರನ್ನು ಕಣ್ಣಲ್ಲಿ ತುಂಬಿ ಕೊಳ್ಳುವುದೇ ಒಂದು ರೋಮಾಂಚನ ..... ಅಜ್ಜಿ ಮನೆಯ ಹಿಂದಿನ ಬೆಟ್ಟದ ತುದಿಗೆ ಹೋಗಿ ಘಟ್ಟದ ಸಾಲು , ಅಡಿಕೆ ತೋಟಗಳು , ನೀರಿನ ಚಿತ್ತಾರ ....!!!ಇವುಗಳನ್ನು ನೋಡಿಯೇ ಸವಿಯಬೇಕು ...... ಸಂಜೆ ಆಯಿತೆಂದರೆ ಬಚ್ಚಲ ಬೆಂಕಿ, ಅಡಿಕೆ ಕಾಯಿಸುವ ಹಬೆ, ಅಜ್ಜನ ಭಾಗವತಿಕೆ , ಅಜ್ಜಿಯ ಕಥೆಗಳು, ಭಾವದಿಕ್ಕಳ ಹುಸಿಜಗಳ, ಕೆಲಸದವರ ಸೇಂದಿ ಹಾಡುಗಳು .......ಅದೊಂದು ಕಲ್ಪನಾ ಲೋಕವೇ ಸರಿ ....... ನಗರದ ಕಟ್ಟಡದ ಮೇಲಿನ ಇಬ್ಬನಿಯನ್ನು ಮಾತ್ರ ನೋಡಿದವರಿಗೆ ಮಲೆನಾಡು ಒಂದು ವಿಸ್ಮಯ ವಿಶ್ವ ...ಈ ಸಲವಾದರೂ ಚಳಿಗಾಲದಲ್ಲಿ ಊರಿಗೆ ಹೋಗಿ ಹಳೆಯ ನೆನಪನ್ನು ಹಸಿಗೊಳಿಸಬೇಕು ಎನ್ನುವ ಹಂಬಲ ಮಾತ್ರ , ನಮ್ಮ ಬಿಡುವಿಲ್ಲದ ಕೆಲಸದ (?) ನಡುವೆ ಒಂದು ಚಿಕ್ಕ ನಸುನಗುವನ್ನು ತರುವುದು ಸುಳ್ಳಲ್ಲ ..........!!!

Tuesday, December 1, 2009

ಮೌನದ ಹಾಡು.....ನೆನಪಿನ ಜಾಡು


ದಿನವೂ ನಡೆಯುತ್ತಿದ್ದ ದಾರಿ ಇದ್ದಕ್ಕಿದ್ದಂತೆ ಹೊಸತೇನೋ ಎನ್ನುವಂತಹ ಅಭದ್ರ ಭಾವನೆ .... ಜೊತೆ ಜೊತೆಗೆ ನಗುತ್ತ , ಮಾತನಾಡುತ್ತ , ವಿಷಯಗಳ ಬಗ್ಗೆ ಚರ್ಚಿಸುತ್ತ ನಡೆದ ಹಾದಿ ಇದೇನಾ ಎನ್ನುವಂತ ಪ್ರಶ್ನೆ ಕೆಲವೊಮ್ಮೆ ಧುತ್ತನೆ ಎದುರಾಗುತ್ತದೆ. ಎಂದೋ ಆಡಿದ ಮಾತುಗಳು ಪುನಃ ಪುನಃ ಕಿವಿಯಲ್ಲಿ ಅನುರಣಿಸುತ್ತವೆ. ಆ ಮೌನ ಸಂಭಾಷಣೆಗೆ ಹೆಸರು ಕೊಡುವ ಧೈರ್ಯ ಆಗಲೂ ಇರಲಿಲ್ಲ, ಬಹುಶ ಈಗಲೂ ಇಲ್ಲ... ಇವುಗಳು ಎಲ್ಲರನ್ನು ಒಂದಲ್ಲ ಒಂದು ಬಾರಿ ಕಾಡಿರುತ್ತದೆ ,ಆದರೆ ಅದನ್ನು ಅರ್ಥೈಸುವ ಪ್ರಜ್ಞೆ ಅಥವಾ ತಿಳುವಳಿಕೆ (?) ಬೇಕೆಂದೇ ನಮ್ಮಲ್ಲಿ ಕೊಟ್ಟಿಲ್ಲವೇನೋ ಆ ಮೇಲಿನವನು .........ಇದನ್ನು ವಿಪರ್ಯಾಸ ಎನ್ನುವುದೋ , ಅಥವಾ ಬದುಕಿನ ಯಾವುದೋ ಹಂತದಲ್ಲಿ ಇದನ್ನು ನೆನಪಿಸಿ ಮುಗುಳ್ನಗುವನ್ನು ತರಿಸುವ ಒಂದು ಸಿಹಿಯಾದ ಮೋಸ ಎನ್ನುವುದೋ ಅವರವರ ಭಾವಕ್ಕೆ ಬಿಟ್ಟಿದ್ದು......

Wednesday, November 11, 2009

ಮೊದಲ ಕನಸು...

ನಮ್ಮ ಮನಸ್ಸಿನ ಪಿಸುಮಾತುಗಳನ್ನು ಎಲ್ಲರಿಗೂ ಕೇಳಿಸುವ ಹಾಗೆ ಆಡುವುದು ಎಷ್ಟು ಸರಿ ಎಷ್ಟು ತಪ್ಪು ಎನ್ನುವ ಗೊಂದಲದ ನಡುವೆಯೇ ಈ ಹೊಸ ಭಾಷ್ಯಕ್ಕೆ(?) ಮುನ್ನುಡಿ ಬರೆಯುತಿದ್ದೇನೆ. ಏನೇ ಆದರೂ ಹೊಸತನಕ್ಕೆ, ಹೊಸ ಕಾಲಮಾನಕ್ಕೆ, ಹೊಂದಿಕೊಂಡು, ಬದಲಾವಣೆಯನ್ನು ಒಪ್ಪಿಕೊಂಡು ಮನಸ್ಸಿನ ಎಲ್ಲ ತುಮುಲಗಳನ್ನು ಬರೆಯದಿದ್ದರೂ ಕೆಲವನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುವ ಆಸೆಯೊಂದಿಗೆ.......
ಈ ನನ್ನ ಮೊದಲ ಕನಸು.........